ನವೆಂಬರ್ ಒಂದು ಬಂತು !!!
ಅಂತಹ ಸಡಗರ ಏನೂ ಕಾಣಿಸುತಿಲ್ಲ, ಅದರೂ ಕೆಲವು ವಿಷಯಗಳು ಹಾಗು ಪ್ರಶ್ನೆಗಳು ಮಾತ್ರ ಪ್ರತಿ ವರುಷ ಮರುಕಳಿಸುತ್ತಲೇ ಇರುತ್ತದೆ. ಅಂಥಹ ಕೆಲವು ಪ್ರಶ್ನೆಗಳು,
೧. ಕರ್ನಾಟಕ ರಾಜ್ಯೋತ್ಸವ - ಇದನ್ನು ಉಚ್ಚರಿಸಲು ಬಾರದ ಕನ್ನಡಿಗರು, ಕರ್ನಾಟಕ್ ರಾಜ್ಯೋತ್ಸವ್, ಕರ್ನಾಟಕ ರಾಜೋತ್ಸವ, ನವೆಂಬರ್ ಒಂದು ಅನ್ನುವುದನ್ನು ಮುಂದುವರೆಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಎಂದು ಹೇಳಲು ಬಾರದವ ಕನ್ನಡಿಗನಲ್ಲದಿದ್ದರೆ ಎಲ್ಲರೂ ಸರಿ ಮಾಡಲು ಮುಂದೆ, ಅದೇ ಅವರ ಕನ್ನಡ ಉಚ್ಚಾರಣೆ ತಪ್ಪೋ ಸರಿಯೋ ಎಂದು ಯೋಚಿಸುವುದಿಲ್ಲವೆಕೆ ??
೨. ಕನ್ನಡ ರಾಜ್ಯೋತ್ಸವ - ೧೯೫೬ ನೇ ಇಸವಿ ನವೆಂಬರ್ ೧ರಂದು ಕರ್ನಾಟಕ ರಾಜ್ಯವನ್ನು ಘೋಷಿಸಿದ ದಿನ . ಕನ್ನಡ ಭಾಷಿಕರನ್ನು ಒಂದೇ ರಾಜ್ಯದಡಿ ಸೇರಿಸಿ ಘೋಷಿಸಿದ ದಿನ. ನಾವು ಇಲ್ಲಿ ಒಪ್ಪಬೇಕಾದ ಸಂಗತಿಯಂದರೆ, ನವೆಂಬರ್ ೧ ಕರ್ನಾಟಕ ರಾಜ್ಯೋತ್ಸವ ಅದು ಕನ್ನಡ ರಾಜ್ಯೋತ್ಸವ ಅಲ್ಲ ಅನ್ನುವುದು. ಕರ್ನಾಟದಲ್ಲಿ ಕೊಡವ, ಸೋಲಿಗ, ತುಳು, ಕೊಂಕಣಿ ಭಾಷೆಗಳು ಕನ್ನಡದ ಜೊತೆಯಲ್ಲಿ ಬಳಕೆ ಅಲ್ಲಿದೆ. ಕೊರವ, ಬಡಗ, ಎರವ, ಇರುಳ, ಗೌಳಿ, ಜೇನುಕುರುಬ, ಬೆಟ್ಟಕುರುಬ, ಸಿದ್ದಿ, ಹಕ್ಕಿ ಪಿಕ್ಕಿ ಭಾಷೆಗಳು ಇದೇ ನೆಲೆದ ಭಾಷೆಗಳು ಅನ್ನುವುದರ ಅರಿವು ಇಲ್ಲದವರು ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸಬಹುದು. ಇದರಲ್ಲಿ ಎಷ್ಟೊ ಭಾಷೆಗಳು ನಶಿಸಿ ಹೋಗುವದರಲ್ಲಿದೆ. ಕನ್ನಡಕ್ಕಾಗಿ ಹೊರಡುವ ಶೋಕಿ ನಾಯಕರೆ ನಿಮಗೆ ಇದರ ಅರಿವಿದೆಯೇ ??
೩. ಭಾಷಣ ರಾಜ್ಯೋತ್ಸವ - ಪ್ರತಿ ವರ್ಷದಂತೆ ಈ ವರುಷವು, ಕೆಂಪು ಹಳದಿ ಭಾವುಟ ಹಾರಿಸಿ, ನಾಡು ದೇಶ ಭಾಷೆ ಬಗ್ಗೆ ಭಾಷಣ ಇದ್ದೆ ಇರುತ್ತದೆ. ಭಾಷಣದಲ್ಲಿ ಜ್ಞಾನಪೀಠ ಪ್ರಶಸ್ತಿಗಳ ಬಗ್ಗೆ ಮಾತನಾಡುವವರು ಏಳು ಪ್ರಶಸ್ತಿಗಳು ಬಂದಿವೆ ಎಂದು ಹೇಳಿದರೆ, ಅದನ್ನು ತಿದ್ದಲು ಅಕ್ಕ ಪಕ್ಕದವರಿಗಾದರೂ ಗೊತ್ತಿರಬೇಕಲ್ಲವೇ ??
೪. ಸಿನಿಮಾ ರಾಜ್ಯೋತ್ಸವ - ಈ ವರುಷವು ನವೆಂಬರ್ ೧ರಂದು ಕನ್ನಡ ಸಿನೆಮಾಗಳನ್ನು ಓಡಿಸದ ಚಿಂತ್ರಮಂದಿರಗಳು ಇದ್ದೆ ಇರುತ್ತದೆ. ಕನ್ನಡ ಸಂಘಟನೆಗಳು ೧ನೇ ತಾರೀಕು ಬೆಳ್ಳಗ್ಗೆ ಮಾಲ್ ಗಳಿಗೆ ನುಗ್ಗಿ ಪ್ರತಿಭಟನೆ ಮಾಡೇ ಮಾಡುತಾರೆ. ಸಾರ್, ನೀವು ಕೂಡ ನಿಮ್ಮ ದೊಡ್ಡ ಗ್ಯಾಲಕ್ಸಿ ಫೋನಿನಲ್ಲಿ 'ಬುಕ್ ಮೈ ಶೋ' ಅಪ್ಲಿಕೇಶನ್ ನೋಡಿರುತೀರ, ಅದರಲ್ಲಿ ನವೆಂಬರ್ ೧ ನೇ ತಾರೀಕು ಹಾಕಲ್ಪಡುವ ಸಿನಿಮಾಗಳನ್ನು ನೋಡಿ, ಫೇಸ್ಬುಕ್ ನಲ್ಲಿ ಒಂದು ಅಪ್ಡೇಟ್ ಹಾಕಿ ಸುಮ್ಮನಾಗಿರುತ್ತಿರ. ರಾಜ್ಯೋತ್ಸವದ ದಿನ ಬೆಳಗ್ಗಿನಿಂದ - ಮಧ್ಯನದವರೆಗೆ ನ್ಯೂಸ್ ಚಾನೆಲ್ ಗಳೊಂದಿಗೆ ಮಾಲ್ ಸುತ್ತುವುದೇಕೆ ??
೫. ಕಲಾ ರಾಜ್ಯೋತ್ಸವ - ರಾಜ್ಯೋತ್ಸವದ ದಿನ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ ನೃತ್ಯ ಗಳಿಗೆ ತುಂಬ ಬೇಡಿಕೆ ಬಂದುಬಿಡುತ್ತದೆ. ಇದೆ ಅಕ್ಟೋಬರ್ ನಲ್ಲಿ ನಾಡ ಹಬ್ಬಕ್ಕೆ ಇವರನ್ನು ಯುವ ದಸರಾದ ಯಾವುದಾದರು ಒಂದು ದಿನ ವಿಶೇಷ ಪ್ರದರ್ಶನವಿರಲಿಲ್ಲ ಏಕೆ ??
೬. ಫೋಟೋ ರಾಜ್ಯೋತ್ಸವ - ಪ್ರತಿ ವರುಷವು ಕೆಂಪು ಹಳದಿ ಭಾವುಟದ ಮುಂದೆ ತಾಯಿ ಭುವನೇಶ್ವರಿಯ ಫೋಟೋ ಇತ್ತು ಆಚರಿಸುದು ರೂಡಿ. ಇದರ ಜೊತೆಗೆ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರನಾಗ್ ರ ಚಿತ್ರ ಪಟಗಳು, ಕೆಲವು ಸಾಹಿತಿಗಳ ಚಿತ್ರಗಳು ಇರುವ ಒಂದು ಬ್ಯಾನರ್ / ಫ್ಲೆಕ್ಸ್ ಇರುತ್ತದೆ. ವಿಷಾದದ ಸಂಗತಿಯೆಂದರೆ ಇದರ ಪಕ್ಕದಲ್ಲಿ ಇಬ್ಬರು ರಾಜಕಾರಣಿಗಳ ಫುಲ್ ಲೆಂಗ್ತ್ ಪ್ರಿಂಟ್ ಇರುತ್ತದೆ. ಇದರ ಕೆಳಗೆ ಸುಮರು ೩೦ - ೫೦ ಮುಖಗಳಿರುತ್ತದೆ. ಇವರೆಲ್ಲ ಯಾರು ಕರ್ನಾಟಕ ರಾಜ್ಯೋತ್ಸವದಂದು ಇವರ ಫೋಟೋ ಹಾಕಿ ನೆನಪಿಸಿಕೊಳ್ಳುವಂಥಹ ಅವಶ್ಯಕತೆಯಾದರೂ ಏನು ??
೭. ಪ್ರಶಸ್ತಿ ರಾಜ್ಯೋತ್ಸವ - ಪ್ರತಿ ವರುಷ ರಾಜ್ಯದಲ್ಲಿ ತನ್ನ ಗೌರವ ಕಳೆದುಕೊಳ್ಳುತಿರುವ ಪ್ರಶಸ್ಥಿಯೆಂದರೆ "ರಾಜ್ಯೋತ್ಸವ ಪ್ರಶಸ್ತಿ". ಈ ಪ್ರಶಸ್ತಿಗೆ ಬಾಜನರಾಗುವವರ ಸಂಖ್ಯೆ ಡಾಲರ್/ಪೆಟ್ರೋಲ್/ಈರುಳ್ಳಿ ಗಿಂತ ವೇಗವಾಗಿ ಬೆಳೆದೆ ಬಿಡುತ್ತದೆ. ನರ್ಸರಿ ಶಾಲೆಯಲ್ಲಿ ಎಲ್ಲರಿಗೂ ಗುಡ್ / ಸ್ಟಾರ್ ಕೊಡುವ ರೀತಿಯಲ್ಲಿ, ಪ್ರಶಸ್ತಿ ಹಂಚುವುದೇಕೆ??
೮. ವಸ್ತ್ರ ರಾಜ್ಯೋತ್ಸವ - ನವೆಂಬರ್ ಬರುತ್ತಿದೆ ಎಂದರೆ, ಎಲ್ಲೊ ಎತ್ತಿಟ್ಟು ಮರೆತ ಭಾವುಟ, ಕೆಂಪು ಹಳದಿಯ ಮಫ್ಲರ್ ಹುಡುಕುವುದು ಸಾಮಾನ್ಯ. ಬಿಳಿ ಬಟ್ಟೆ ತೊಟ್ಟು ಈ ಮಫ್ಲರ್ ಹಾಕಿ ಬೈಕ್ ಆಟೋ ಕಾರುಗಳಿಗೆ ಭಾವುಟ ಕಟ್ಟಿ rally ಮಾಡುವುದು ಖಚಿತ. ಇತ್ತೇಚೆಗೆ ಹೊಸದಾಗಿ ಕನ್ನಡದ ಅಕ್ಷರಗಳ ಮುದ್ರಣ ಇರುವ ಟಿ-ಶರ್ಟ್ ಗಳನ್ನ ಕೊಂಡುಕೊಳ್ಳುವುದು ಹೆಚ್ಚಾಗಿದೆ. ಕೈ-ಮಗ್ಗ , ಖಾದಿ ಎಂಬ ಪದಗಳು ಇನ್ನೂ ಚಾಲ್ತಿಯಲ್ಲಿದ್ದರು ಟಿ-ಶರ್ಟ್ ಬಟ್ಟೆ ಮಾತ್ರ nike/puma ಆಗಿರಬೇಕು ಅನ್ನುವುದು ಸರಿಯೇ??
ಕರ್ನಾಟಕ ರಾಜ್ಯೋತ್ಸವ ಕೇವಲ ಕನ್ನಡ ರಾಜ್ಯೋತ್ಸವವಾಗದೆ, ಕನ್ನಡ ಸಿನಿಮಾ ನೋಡಿ ಎಂದು ಹೇಳುವುದು/ಕೇಳುವುದು ಅಲ್ಲದೆ, ಕನ್ನಡ ಬರಹಗಳಿರುವ ವಸ್ತ್ರ ಧರಿದುವುದಲ್ಲದೆ, ಅನ್ಯ ಭಾಷಿಕರನ್ನು ತೆಗಳುವುದಲ್ಲದೆ, ಲೆಕ್ಕವಿಲ್ಲದೆ ಪ್ರಶಸ್ತಿ ಕೊಡುವುದಲ್ಲದೆ, ಕರ್ನಾಟಕ ರಾಜ್ಯ ಒಂದು ಎನ್ನುವುದನ್ನು ನೆನೆಪಿಸಿಕೊಂಡು, ಬರಿ ಕನ್ನಡವಲ್ಲ ಕರ್ನಾಟಕದ ಎಲ್ಲಾ ಭಾಷೆಗಳನ್ನು ಸಂಭ್ರಮಿಸುತ್ತಾ, ಕರ್ನಾಟಕದ ಎಲ್ಲಾ ಭಾಗಗಳ ಜನರು ಅರ್ಥ ಪೂರ್ಣವಾಗಿ ಆಚರಿಸಬೇಕು!!!
-ಧನು